ನಡಿಗೆ
ಎಲ್ಲರಿಗೂ ಅನುಕೂಲವಾದ ವ್ಯಾಯಾಮ ಚಟುವಟಿಕೆ. ಇದನ್ನು ಅಲೆದಾಟ, ತಿರುಗಾಟ ಎಂದೂ ಕರೆವುದಿದೆ (ರ್ಯಾಂಬ್ಲಿಗ್, ವಾಕಿಂಗ್). ಸುಲಭ, ಸರಳ, ವೆಚ್ಚವಿಲ್ಲದ್ದು. ಅತಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ. ಉದ್ಯೋಗದಲ್ಲಿರುವ ಅನೇಕರಿಗೆ ವ್ಯಾಯಾಮದ ಇತರ ಪ್ರಕಾರಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇಂಥ ಜನರಿಗೆ ನಡಿಗೆ ಅತ್ಯಂತ ಅನುಕೂಲವಾದ ವ್ಯಾಯಾಮ. ನಗರಗಳಲ್ಲಿ ವಾಸಿಸುವ, ಕೆಲಸದಿಂದ ನಿವೃತ್ತಿ ಹೊಂದಿರುವ ಮತ್ತು ಪ್ರಾಯ ಕಳೆದ ಅನೇಕರು ನಸುಕಿನಲ್ಲಿ ಇಲ್ಲವೆ ಸಾಯಂಕಾಲ ಅಥವಾ ಎರಡು ಹೊತ್ತೂ ಪ್ರತಿನಿತ್ಯ ಕೆಲವೊಂದು ದೂರ ನಡೆಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಗಾಂಧಿಯವರಿಗೆ ಪ್ರಾರ್ಥನೆಯಂತೆ ಸಂಜೆ ಅಥವಾ ಮುಂಜಾನೆ ಸ್ವಲ್ಪದೂರ ನಡೆಯುವುದು ಕಡ್ಡಾಯ ವಿಧಿಯಾಗಿತ್ತು. ನಡೆಯಲು ಬಯಸುವವರಿಗೆ ಯಾವುದೇ ಉಪಕರಣಗಳ ಅಥವಾ ಸಾಧನ ಸಾಮಗ್ರಿಗಳ ಅಗತ್ಯವಿರುವುದಿಲ್ಲ. ತರಬೇತಿಯ ಅವಶ್ಯಕತೆಯಿಲ್ಲ. ಅಪಾಯದ ಭಯವಿಲ್ಲ. ಯಾರು ಬೇಕಾದರೂ ಇತರರ ಸಹಾಯವಿಲ್ಲದೇ ನಡಿಗೆಯಲ್ಲಿ ಭಾಗವಹಿಸಬಹುದು. ಸುಗಮವಾದ ರಸ್ತೆಯಲ್ಲಿ ನಡೆಯುವರಿಗಿಂತಲೂ ಗುಡ್ಡಬೆಟ್ಟಗಳಲ್ಲಿ ನಡೆಯುವವರಿಗೆ ಬೇಗ ದಣಿವುಂಟಾಗುತ್ತದೆ. ನಡಿಗೆಗೆ ನೇರ ನಿಲವು ಬೇಕು. ಕ್ರಮಬದ್ಧವಾಗಿ ಹೆಜ್ಜೆ ಹಾಕಬೇಕು. ಸರಳವಾದ ಸಡಿಲಾದ ಉಡುಪು ಬೇಕು. ಉತ್ತಮವಾದ ಪಾದರಕ್ಷೆ ಅವಶ್ಯವಾಗಿ ಬೇಕು. ನಡೆಯುವವರು ಒಂದು ಕ್ರಮದಲ್ಲಿ ನಡೆಯುವುದು ಉತ್ತಮ. ಒಮ್ಮೆಲೇ ನಡಿಗೆಯ ವೇಗವನ್ನು ಹೆಚ್ಚಿಸಿದರೆ ಬೇಗನೆ ದಣಿವಾಗುವ ಸಂಭವವಿದೆ. ಆದುದರಿಂದ ಕ್ರಮಕ್ರಮವಾಗಿ ನಡೆದು ಅನಂತರ ವೇಗ ಹೆಚ್ಚಿಸಿದರೆ ಹೆಚ್ಚು ಆಯಾಸವಿಲ್ಲದೇ ನಿಶ್ಚಿತ ಸ್ಥಳ ತಲುಪಬಹುದು. ನಡಿಗೆಯನ್ನು ದಿನದ ಯಾವುದೇ ವೇಳೆಯಲ್ಲಿ ಕೈಕೊಳ್ಳಬಹುದಾದರೂ ನಸುಕಿನಲ್ಲಿಯೇ ನಡೆಯುವುದು ಅನುಕೂಲ. ದಿನಕ್ಕೆ 3-4 ಮೈಲಿ ನಡೆದರೆ ಸಾಕು. ಒಬ್ಬ ಆರೋಗ್ಯವಂತ ಮನುಷ್ಯ ದಿನಕ್ಕೆ 25-30 ಮೈಲಿಗಳಷ್ಟು ನಡೆಯಲು ಶಕ್ಯನಿರುತ್ತಾನೆ. ಇಂಗ್ಲೆಂಡಿನ ಲೂಯಿ ಗಿಬ್ಬನ್ ಎಂಬಾತ 1967 ನವೆಂಬರ್ ತಿಂಗಳಲ್ಲಿ 42 ಗಂಟೆಗಳ ಕಾಲ ನಿರಂತರವಾಗಿ ನಡೆದು 160.9 ಮೈಲಿ ಕ್ರಮಿಸಿರುವುದು ಒಂದು ವಿಶ್ವ ದಾಖಲೆಯಾಗಿದೆ.

	ದಿನವೂ ನಡೆದಾಡುವ ಹವ್ಯಾಸ ಇಟ್ಟುಕೊಂಡವರು ಒಂಟೊಂಟಿಯಾಗಿ ಹೋಗುವುದೇ ಉತ್ತಮ. ಬೇಸರವಾದರೆ ಜೊತೆಗೆ ತಮ್ಮ ಮನೋಧರ್ಮಕ್ಕೆ ಹೊಂದುವ ಇನ್ನೊಬ್ಬರನ್ನು ಕರೆದೊಯ್ಯಬಹುದು. ಇಬ್ಬರಿಗಿಂತ ಹೆಚ್ಚಾದರೆ ಗುಂಪಾಗುತ್ತದಾಗಿ ಬೇಡದ ಹರಟೆ ಗಲಾಟೆಗಳಿಗೆ ಅವಕಾಶವಾದಂತಾಗುತ್ತದೆ. ನಡೆಯುವಾಗ ಮೌನವಾಗಿರುವುದು ಒಳ್ಳೆಯದು. ಒಂದೇ ವೇಗದಲ್ಲಿ ಕಾಲು ಹಾಕುತ್ತಾ ಒಂದೇ ವೇಗದಲ್ಲಿ ಉಸಿರಾಡುತ್ತ ಕೈಗಳೆರಡನ್ನೂ ಬೀಸುತ್ತ ಓಡಾಡಿದರೆ ರಕ್ತಚಲನೆ ಚೆನ್ನಾಗಿ ಆಗುತ್ತದೆ. ಶ್ವಾಸಕೋಶಗಳು ಚುರುಕಾಗುತ್ತವೆ. ಬೆಳಗಿನ ಗಾಳಿಯಲ್ಲಿ ಯಥೇಚ್ಛವಾಗಿ ಸಿಗುವ ಓeóÉೂೀನ್ ಅನಿಲ ದೇಹಕ್ಕೆ ಹೊಸ ಚೈತನ್ಯವನ್ನು ಕೊಡುತ್ತದೆ. ರಕ್ತ ಶುದ್ಧಿಯಾಗುತ್ತದೆ. ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ವಾತಾವರಣದ ಚಳಿ ಬಿಸಿಗಳನ್ನು ಎದುರಿಸುವ ಶಕ್ತಿ ಬರುತ್ತದೆ. ಚೆನ್ನಾಗಿ ಬೆವರು ಸುರಿಯುತ್ತದಾಗಿ ಆರೋಗ್ಯ ಉತ್ತಮವಾಗಿರುತ್ತದೆ.

	ಬೆಳಗಿನ ಓಡಾಟ ತುಂಬ ಸುಸ್ತಾಗುವಷ್ಟು ಇರಬಾರದು ದಿನದ ಕೆಲಸಕ್ಕೆ ಅದು ಹೊಸ ಚೈತನ್ಯವನ್ನು ಕೊಡುವಷ್ಟಾದರೆ ಸಾಕು. ಸಂಜೆಯ ಓಡಾಟ ರಾತ್ರಿ ಒಳ್ಳೆ ನಿದ್ರೆ ಬರುವಷ್ಟು ಶ್ರಮದ್ದಾದರೆ ಸಾಕು.

	ವಿಹಾರಕ್ಕೆಂದೇ ದಿನವೂ ಓಡಾಡುವವರಿದ್ದಾರೆ. ಅಂಥ ಸೌಲಭ್ಯವಿಲ್ಲದವರು ತಮ್ಮ ವ್ಯವಹಾರಕ್ಕೆ ನಡೆಸುವ ಪ್ರಯಾಣವನ್ನೇ ಓಡಾಟವನ್ನಾಗಿ ಪರಿವರ್ತಿಸಿಕೊಳ್ಳಬಹುದು. ಸೈಕಲ್, ಬಸ್ ಮೊದಲಾದ ವಾಹನಗಳನ್ನು ಅಪೇಕ್ಷಿಸದೆ ನಡೆದೇ ಹೋಗಬಹುದು. ಇದರಿಂದ ಕಾಸು ಉಳಿಯುವುದಲ್ಲದೆ ವ್ಯಾಯಾಮವೂ ಆದಂತಾಗುತ್ತದೆ.

	ಶಾಲಾಮಕ್ಕಳು ಹತ್ತಿರದಲ್ಲಿರುವ ಐತಿಹಾಸಿಕ ಸ್ಥಳಗಳ ವೀಕ್ಷಣೆಗಾಗಿಯೋ ಅಥವಾ ಸುಂದರ ಸ್ಥಳಗಳನ್ನು ನೋಡುವುದಕ್ಕಾಗಿಯೋ ನಡೆದುಹೋಗುತ್ತಾರೆ. ಹೋಗುವಾಗ ಸಂಗಡ ಬುತ್ತಿ ತೆಗೆದುಕೊಂಡು ಹೋಗುತ್ತಾರೆ. ಸಂಜೆ ಮನೆಗೆ ಮರಳುತ್ತಾರೆ. ಚಿಕ್ಕ ಪ್ರವಾಸಗಳು ನಾಲ್ಕೈದು ಮೈಲಿಗಳೊಳಗೆ ಇದ್ದರೆ ನಡೆದುಕೊಂಡು ಹೋಗುವುದು ಉತ್ತಮ. ಸೃಷ್ಟಿ ಸೌಂದರ್ಯವೀಕ್ಷಣೆಗೆ ನಡೆದು ಹೋಗುವುದೇ ಸರಿಯಾದ ಮಾರ್ಗ.

	ವಿದೇಶಗಳಲ್ಲಿ ನಡಿಗೆಯನ್ನೇ ಹವ್ಯಾಸವಾಗುಳ್ಳವರಿಗಾಗಿ ಸಂಘಗಳು ಇರುತ್ತವೆ. ಇಂಗ್ಲೆಂಡಿನಲ್ಲಿ ಅಂಥವನ್ನು ರ್ಯಾಂಬ್ಲರ್ಸ್ ಕ್ಲಬ್ಬುಗಳು ಎಂದೂ ಅಮೆರಿಕದಲ್ಲಿ ಅಂಥವನ್ನು ವಿಲ್ಡರ್‍ನೆಸ್ ಸೊಸೈಟಿಗಳು ಎಂದೂ ಕರೆಯುತ್ತಾರೆ. ಈ ಸಂಘಗಳ ಪ್ರಮುಖ ಕಾರ್ಯ, ಕಾಲ್ನಡಿಗೆಯನ್ನು ಪ್ರೋತ್ಸಾಹಿಸುವುದು. ನಡೆದವರಿಗೆ ಅನುಕೂಲ ಕಲ್ಪಿಸಿಕೊಡುವುದು. ಹೆಚ್ಚಾಗಿ ರಜಾದಿನಗಳಲ್ಲಿ ಅಥವಾ ವಾರಾಂತ್ಯದಲ್ಲಿ ಸದಸ್ಯರು ನಡೆದು ಪ್ರವಾಸ ಹೋಗುತ್ತಾರೆ. ಎಲ್ಲಿಗೆ ಹೋಗುವುದು, ಯಾವ ಮಾರ್ಗವಾಗಿ ಈ ಮೊದಲಾದ ವಿಷಯಗಳನ್ನೆಲ್ಲ ಮೊದಲೆ ನಿಶ್ಚಯಿಸುತ್ತಾರೆ. ಎಲ್ಲ ಸದಸ್ಯರಿಗೆ ತಿಳಿಯಲೆಂದು ಮುಂಚಿತವಾಗಿ ಸಂಘದ ಕಾರ್ಯಕ್ರಮವನ್ನು ಪತ್ರಿಕೆಗಳಲ್ಲಿ ಪ್ರಚಾರ ಮಾಡಿರುತ್ತಾರೆ. ನಡೆದು ಹೋಗಲು ಉತ್ತಮ ಮಾರ್ಗವಿರಬೇಕು. ವಾಹನಸಂಚಾರ ಹೆಚ್ಚಾಗಿರಬಾರದು. ರಸ್ತೆಯ ಬದಿಗಳಲ್ಲಿ ಮರಗಳಿದ್ದರೆ ನೆರಳು ದೊರೆಯುತ್ತದೆ. ಉದ್ಯಾನಗಳಲ್ಲಿ ನಡೆದುಕೊಂಡು ಹೋಗುವವರಿಗೆ ಅನಿರ್ಬಂಧಿತ ಪ್ರವೇಶ ದೊರೆಯಬೇಕು. ಹೆದ್ದಾರಿಯನ್ನು ಬಿಟ್ಟು ಸಣ್ಣ ದಾರಿಗಳಲ್ಲಿ, ಕಾಲುದಾರಿಗಳಲ್ಲಿ ನಡೆಯುವುದು ಉತ್ಸಾಹದಾಯಕ. ದಾರಿ ಇಲ್ಲದಲ್ಲಿ ದಾರಿ ಮಾಡಿಕೊಂಡು ಹೋಗುವ ಸಾಹಸಿಗಳು ಇಲ್ಲದಿಲ್ಲ.

	ನಡೆದು ಹೋಗುವ ಪ್ರವಾಸಿಗಳಿಗೆ ಅನುಕೂಲವಾಗಲೆಂದು ತಂಗುದಾಣಗಳನ್ನು ವಸತಿಗೃಹಗಳನ್ನು ಸ್ಥಾಪಿಸುವ ಸಂಘಗಳುಂಟು. ಇಂಥ ಸಂಘಗಳು ಪರಸ್ಪರ ಸಂಪರ್ಕವಿಟ್ಟುಕೊಂಡು ಸಹಕರಿಸಿ ವ್ಯವಹರಿಸುತ್ತವೆ.

	ಪ್ರಪಂಚದ ಹಲವು ರಾಷ್ಟ್ರಗಳು ಪ್ರತಿವರ್ಷ ನಡಿಗೆ ಸ್ಪರ್ಧೆಯನ್ನು ಏರ್ಪಡಿಸುತ್ತವೆ. ಸ್ಪರ್ಧೆಯ ನಿಯಮಗಳನ್ನು ಅನುಸರಿಸಿ ನಡಿಗೆಯ ಸ್ಪರ್ಧೆಗೆ ಹಿಮ್ಮಡಿಯಿಂದ ಕಾಲ್ಬೆರಳಿನವರೆಗಿನ ಸ್ಪರ್ಧೆ ಎನ್ನುವುದು ವಾಡಿಕೆಯಲ್ಲಿದೆ. ಅಂತರ ರಾಷ್ಟ್ರೀಯ ಪಂದ್ಯಾಟಗಳನ್ನು ನಡೆಸುವ ಅಮೆಚ್ಯೂರ್ ಅತ್ಲೆಟಿಕ್ ಫೆಡರೇಷನ್ ನಡಿಗೆ ಸ್ಪರ್ಧೆಗಾಗಿ ಕೆಲವು ನಿಯಮಗಳನ್ನು ರೂಪಿಸಿದೆ. ಸ್ಪರ್ಧಾಳುಗಳು ಒಂದಿಲ್ಲೊಂದು ಪಾದವನ್ನು ಸದಾ ನೆಲದ ಸಂಪರ್ಕದಲ್ಲಿಡಬೇಕಾಗುತ್ತದೆ. ನೆಲದ ಮೇಲಿನ ಕಾಲು ಒಂದು ಕ್ಷಣವಾದರೂ ನೆಟ್ಟಗಿರಬೇಕು. ನಡೆಯುವಾಗ ಹಿಮ್ಮಡಿ ಮೊದಲು ನೆಲವನ್ನು ಬಿಡಬೇಕು. ಈ ಮೊದಲಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆರೋಗ್ಯವಂತರು ಮಾತ್ರ ಚೆನ್ನಾಗಿ ನಡೆಯ ಬಲ್ಲರು. ಅಥವಾ ಚೆನ್ನಾಗಿ ನಡೆಯುವವರು ಮಾತ್ರ ಆರೋಗ್ಯವಂತರು ಎಂಬ ಹೇಳಿಕೆ ಇಂಗ್ಲೆಂಡಿನಲ್ಲಿ ಒಂದು ಕಾಲದಲ್ಲಿತ್ತು. 1939ರ ಸುಮಾರಿನಲ್ಲಿ ವ್ಯಕ್ತಿಯ ಆರೋಗ್ಯವನ್ನು ನಡಿಗೆಯ ಮೂಲಕ ನಿಶ್ಚಯಿಸಲಾಗುತ್ತಿತ್ತು. 1960ರಲ್ಲಿ ಸ್ವೀಡನ್‍ನಲ್ಲಿ ಸುಮಾರು 30 ಲಕ್ಷ ಸ್ತ್ರೀ ಪುರುಷ ಮತ್ತು ಹುಡುಗರು ನಡಿಗೆ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರು. ನಡಿಗೆಯ ಸ್ಪರ್ಧೆಯಲ್ಲಿ ಭಾಗವಹಿಸುವವರು ವೇಗವನ್ನು ಮತ್ತು ನಡಿಗೆಯನ್ನು ಕಾಯ್ದುಕೊಳ್ಳುವುದು ಅಗತ್ಯ. ಇಂಗ್ಲೆಂಡಿನ ಡಿ.ಜೆ. ತಾಮ್ಸನ್ ಲಂಡನ್ನಿನಿಂದ ಬ್ರೈಟನ್ವರೆಗಿನ 53 ಮೈಲಿ ಅಂತರವನ್ನು 7 ಗಂಟೆ 35 ಮಿನಿಟು 11 ಸೆಕೆಂಡುಗಳಲ್ಲಿ ಕ್ರಮಿಸಿದರು. ಅಮೆರಿಕೆಯಲ್ಲಿ ಕಡಿಮೆ ದೂರವನ್ನು ಕ್ರಮಿಸಲು ಸ್ಪರ್ಧಾಳುಗಳಿಗೆ ಹೇಳುವುದು ರೂಢಿಯಲ್ಲಿದ್ದರೆ ಇತರ ರಾಷ್ಟ್ರಗಳಲ್ಲಿ ಹೆಚ್ಚಿಗೆ ದೂರವನ್ನು ಕ್ರಮಿಸಲು ಹೇಳಲಾಗುತ್ತದೆ

	ಪ್ಯಾರಿಸ್‍ನಿಂದ ಶ್ಟ್ರಾಸ್‍ಬರ್ಗ್ ನಡುವಿನ 312 ಮೈಲಿ ನಡಿಗೆಯ ಸ್ಪರ್ಧೆ ಅತ್ಯಂತ ದೀರ್ಘವಾದ ನಡಿಗೆಯ ಸ್ಪರ್ಧೆ ಎನಿಸಿದೆ. ಪ್ರತಿವರ್ಷ ನಡೆಯುವ ಈ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳಿಗೆ ವಿಶ್ರಾಂತಿಗೆ ಅವಕಾಶವಿಲ್ಲ. ಸಾಮಾನ್ಯವಾಗಿ 70 ಗಂಟೆಗಳಲ್ಲಿ ಈ ದೀರ್ಘದೂರವನ್ನು ಸ್ಪರ್ಧಾಳು ಕ್ರಮಿಸುತ್ತಾನೆ. ಹಿಂದಿನ ಕಾಲದಿಂದಲೂ ನಡಿಗೆಯ ಸ್ಪರ್ಧೆ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ರೂಢಿಯಲ್ಲಿದ್ದರೂ 19ನೆಯ ಶತಮಾನದಲ್ಲಿ ಹೆಚ್ಚು ಜನ ನಡಿಗೆ ಸ್ಪರ್ಧೆಯತ್ತ ಆಕರ್ಷಿತರಾದರು. ಕೆಲವೊಮ್ಮೆ ಮಾನವ ಮತ್ತು ಕುದುರೆಗಳಿಗೂ ನಡಿಗೆಯ ಸ್ಪರ್ಧೆ ಏರ್ಪಡಿಸಿದ ಉದಾಹರಣೆಯಿದೆ. ಇಂಥ ಸ್ಪರ್ಧೆಯಲ್ಲಿ ಕ್ರಮಿಸುವ ದಾರಿ ಹೆಚ್ಚಿದ್ದಾಗ ಮಾನವನೇ ಸ್ಪರ್ಧೆಯಲ್ಲಿ ಗೆಲ್ಲುತ್ತಿದ್ದ.

	1870 ಮತ್ತು 1880ರ ನಡುವೆ ಅಮೆರಿಕೆಯಲ್ಲಿ ನಡೆಯುತ್ತಿದ್ದ ನಡಿಗೆಸ್ಪರ್ಧೆ ಉಲ್ಲೇಖನೀಯ. ಈ ಸ್ಪರ್ಧೆಯ ಅವಧಿ ಆರು ದಿವಸಗಳು ಅಂದರೆ 144 ಗಂಟೆ. ನ್ಯೂಯಾರ್ಕ್ ನಗರದ ಗಿಲ್‍ಮೋರ್ ಗಾರ್ಡನ್ ಸ್ಪರ್ಧೆಯ ಸ್ಥಳ. ಅಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮಗೆ ಮನಸ್ಸಿಗೆ ಬಂದತ್ತ ನಡೆಯಬಹುದು. ವೇಗದಲ್ಲಿ ನಡೆಯಬಹುದು. ನಿಧಾನವಾಗಿ ನಡೆಯಬಹುದು. ವಿಶ್ರಾಂತಿ ಪಡೆದು ನಡೆಯಬಹುದು. ಆದರೆ ಸ್ಪರ್ಧೆಯ ಅವಧಿಯ ಕೊನೆಗೆ ಅತ್ಯಂತ ಹೆಚ್ಚು ದೂರವನ್ನು ಕ್ರಮಿಸಿದವರಿಗೆ ಬಹುಮಾನ ನೀಡಲಾಗುತ್ತದೆ.

	ಒಲಿಂಪಿಕ್ ಕ್ರೀಡೆಗಳಲ್ಲಿ ನಡಿಗೆ ಸ್ಪರ್ಧೆ ಪ್ರಥಮವಾಗಿ ಸೇರಿಸಲ್ಪಟ್ಟಿತು (1908). ಇದರಿಂದ ನಡಿಗೆ ಸ್ಪರ್ಧೆಯಲ್ಲಿ ಜನರಿಗೆ ಆಸಕ್ತಿ ಉಂಟಾಗಲು ತುಂಬ ಸಹಾಯವಾಯಿತು. ಒಲಿಂಪಿಕ್ಸ್‍ನಲ್ಲಿ ಸೇರಿದ ಪ್ರಥಮ ನಡಿಗೆ ಸ್ಪರ್ಧೆಯಲ್ಲಿ ಇಂಗ್ಲೆಂಡಿನ ಜಿ.ಇ. ಲಾರ್ನರ್ ಮತ್ತು ಇ.ಜೆ. ವೆಬ್ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು. 1932ರಲ್ಲಿ ಇಂಗ್ಲೆಂಡಿನ ಟಿ.ಡಬ್ಲ್ಯು. ಗ್ರೀನ್ ಎಂಬಾತ ಒಲಿಂಪಿಕ್ಸ್‍ನ 50 ಸಾವಿರ ಮೀಟರ್ ನಡಿಗೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ.

	ಈಗ ಒಲಿಂಪಿಕ್ಸ್‍ನಲ್ಲಿ 50 ಸಾವಿರ ಮೀಟರ್ ಮತ್ತು 20 ಸಾವಿರ ಮೀಟರ್ ದೂರದ ನಡಿಗೆ ಸ್ಪರ್ಧೆಗಳಿವೆ. ರಷ್ಯ, ಸ್ವೀಡನ್, ಆಸ್ಟ್ರೇಲಿಯ, ಚೆಕೊಸ್ಲೊವಾಕಿಯ, ಇಟಲಿ, ಇಂಗ್ಲೆಂಡ್, ನ್ಯೂಜಿûಲೆಂಡ್, ಅಮೆರಿಕ ಮತ್ತು ಪೂರ್ವಜರ್ಮನಿಗಳು ನಡಿಗೆ ಸ್ಪರ್ಧೆಯಲ್ಲಿ ಮೇಲುಗೈ ಪಡೆದಿದೆ.

	1964ರ ಒಲಿಂಪಿಕ್ಸ್ ಪಂದ್ಯದಲ್ಲಿ ಅಮೆರಿಕೆಯ ಕೆನ್ ಮ್ಯಾತ್ಯೂ 20 ಸಾವಿರ ಮೀಟರ್ ದೂರವನ್ನು ಒಂದು ಗಂಟೆ 29 ಮಿನಿಟು 34 ಸೆಕೆಂಡುಗಳಲ್ಲಿ ನಡೆದು ಬಂಗಾರ ಪದಕ ಪಡೆದ. ಹಾಗೂ ಇಟಲಿಯ ಅಬ್ದೊನ್ ಪಮಿಚ್ 50 ಸಾವಿರ ಮೀಟರ್ ದೂರವನ್ನು 4 ತಾಸು 11 ಮಿನಿಟು 12.4 ಸೆಕೆಂಡಿನಲ್ಲಿ ನಡೆದು ಪ್ರಥಮ ಬಹುಮಾನ ಬಂಗಾರದ ಪದಕ ಪಡೆದ.

	ಗಿನ್ನೀಸ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್-1977 ಎಂಬ ಪುಸ್ತಕದಿಂದ ಸಂಗ್ರಹಿಸಿದ ಕೆಲವೊಂದು ಸ್ವಾರಸ್ಯಪೂರ್ಣ ನಡಿಗೆಯ ದಾಖಲೆಗಳ ವಿವರಗಳಿವು: ಮಾಂಟ್ರಿಯಲ್‍ನಲ್ಲಿ ಜರುಗಿದ (1976) ಒಲಿಂಪಿಕ್ ಕ್ರೀಡೆಗಳಲ್ಲಿ ಆದದ್ದು 20 ಕಿ.ಮೀ. ದೂರದ 25ನೆಯ ಒಲಿಂಪಿಕ್ ನಡಿಗೆಯ ಸ್ಪರ್ಧೆ. ಇಟಲಿಯ ಯೂರೋ ಫ್ರಿಗೀರೀಯೋ ಎಂಬುವ 1920ರಲ್ಲಿ 3,000 ಮೀಟರ್ ಹಾಗೂ 10,000 ಮೀಟರ್ ಉದ್ದದಷ್ಟೂ 1924ರಲ್ಲಿ 10,000 ಮೀಟರ್ ಉದ್ದದಷ್ಟೂ ಇದ್ದ ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ಚಿನ್ನದ ಪದಕಗಳನ್ನು ಪಡೆದ ಏಕೈಕ ವ್ಯಕ್ತಿ. ಈತನಿಗೆ 1932ರಲ್ಲಿ 50,000 ಮೀಟರ್ ಉದ್ದದ ನಡಿಗೆಗಾಗಿ ಕಂಚಿನ ಪದಕವೂ ಲಭಿಸಿತ್ತು. ಇದೇ ರೀತಿಯಲ್ಲಿ ಸೋವಿಯತ್ ದೇಶದ ವ್ಲಾಡಿಮಿರ್ ಗೋಲ್ಯೂಬ್ನಿಬ್ಸ್‍ಯೀ ಎಂಬ 1960 ಮತ್ತು 1968ರ ಒಲಿಂಪಿಕ್ಸ್‍ನ 20,000 ಮೀಟರ್ ಉದ್ದ ನಡಿಗೆಯಲ್ಲಿ ಚಿನ್ನದ ಪದಕಗಳನ್ನೂ 1972ರ ನಡಿಗೆಯಲ್ಲಿ ಬೆಳ್ಳಿಯ ಪದಕವನ್ನೂ 1964ರ ನಡಿಗೆಯಲ್ಲಿ ಕಂಚಿನ ಪದಕವನ್ನೂ ಗಳಿಸಿದ.

	ಇಂಗ್ಲೆಂಡಿನ ಎಸೆಕ್ಸಿನವನಾದ ಡೇವಿಡ್ ರೈಡರ್ ಎಂಬಾತ ಪೋಲಿಯೋ ರೋಗಕ್ಕೆ ಒಳಗಾಗಿದ್ದರೂ ಅಮೆರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜೆಲೀಸ್ ಪಟ್ಟಣದಿಂದ ನ್ಯೂಯಾರ್ಕ್ ನಗರದ ನಡುವಿನ 2,960 ಮೈಲುಗಳನ್ನು ಕಂಕುಳ ಕೋಲನ್ನೂರಿಕೊಂಡೇ ಕ್ರಮಿಸಿದ (1970). ಗ್ರೇಟ್ ಬ್ರಿಟನಿನ ಫ್ರೀಡರಿಕ್ ಜಾಗೋ ಎಂಬವ 1975ರಲ್ಲಿ ಇಂಗ್ಲೆಂಡಿನ ಟಾಂಟನ್ನಿನ ವಿವೇರಿ ಉದ್ಯಾನದಲ್ಲಿ 308.5 ಮೈಲುಗಳಷ್ಟು ದೂರವನ್ನು 143 ಗಂಟೆ 3 ಮಿನಿಟುಗಳಲ್ಲಿ ನಡೆದು ದಾಖಲೆ ಸ್ಥಾಪಿಸಿದ. ವಿಶ್ರಾಂತಿ ಪಡೆಯದೆ ನಿರಂತರವಾಗಿ ನಡೆಯುತ್ತಲೇ ಇದ್ದ ಈತ ಕಾಲವನ್ನು ಬಳಸಿಕೊಂಡದ್ದು ಶೇಕಡ 98.33ರಷ್ಟು. ಡೇವಿಡ್ ಕುನ್ಸ್ಟ್ ಎಂಬವ ತನ್ನ ಸಹೋದರ ಜಾನ್ ಎಂಬವನೊಡಗೂಡಿ ಪ್ರಪಂಚದ ಸುತ್ತ ನಡೆಯುವ ಸಲುವಾಗಿ ಮಿನಿಸೋಟದ ವಾಸೀಕ ಎಂಬಲ್ಲಿಂದ ತನ್ನ ನಡಿಗೆಯನ್ನು ಪ್ರಾರಂಭಿಸಿದ (10-6-1970). ಜಾನ್ ಮಾರ್ಗಮಧ್ಯದಲ್ಲಿ ಆಫ್ಫನಿ ಡಕಾಯಿತರಿಂದ ಕೊಲ್ಲಲ್ಪಟ್ಟ. 14,500 ಮೈಲುಗಳಷ್ಟು ದೂರ ನಡೆದು ಡೇವಿಡ್ 5-10-1974ರಲ್ಲಿ ಹಿಂದಿರುಗಿದ. ಲ್ಯಾಟ್ವಿಯದ ರೀಗ ಎಂಬಲ್ಲಿಂದ ಸೋವಿಯತ್ ದೇಶದ ವ್ಲಾಡಿವೊಸ್ಟೋಕ್ ಎಂಬಲ್ಲಿಯವರೆಗಿನ 6,800 ಮೈಲುಗಳ ದೂರವನ್ನು ಜ್ಯೋರ್ಗಿಬುಷ್ಯೂವೆವ್ ಎಂಬವ 238 ದಿವಸಗಳಲ್ಲಿ ಕ್ರಮಿಸಿ ಟ್ರಾನ್ಸ್-ಏಷ್ಯ ದಾಖಲೆಯನ್ನು ನಿರ್ಮಿಸಿದ. ಅಮೆರಿಕ ಕೆನಡಗಳ ಒಂದುತುದಿಯಿಂದ ಮತ್ತೊಂದು ತುದಿಯವರೆಗೂ ನಡೆದಿರುವಂಥ ಸಾಹಸಮಯ ದಾಖಲೆಗಳು ಉಂಟು.

	ಟೆಕ್ಸಾಸಿನ ಪ್ಲಿನ್ನೀ ಎಲ್‍ರಿ ವಿಂಗೋ ಎಂಬುವ 15-4-1931ರಲ್ಲಿ ಕ್ಯಾಲಿಫೋರ್ನಿಯದ ಸಾಂತ ಮೋನಿಕಾ ಎಂಬಲ್ಲಿ ಪ್ರಾರಂಭಿಸಿ ಹಿಂದುಹಿಂದಕ್ಕೆ ನಡೆದುಕೊಂಡೇ ತುರ್ಕಿಯ ಇಸ್ತಾನ್‍ಬುಲ್‍ವರೆಗಿನ 8,000 ಮೈಲುಗಳ ದೂರವನ್ನು ಕ್ರಮಿಸಿದ (24-10-1932). ಈತ ತಾನೆಲ್ಲಿ ಹೋಗುತ್ತಿರುವೆ ಎಂಬುದನ್ನು ನೋಡಿಕೊಳ್ಳಲು ವಿಶೇಷ ಕನ್ನಡಕಗಳನ್ನು ಧರಿಸಿದ್ದನಂತೆ. ಹಿನ್ನಡೆತದ ಇತ್ತೀಚಿನ (1976) ದಾಖಲೆ ಎಂದರೆ ಇಂಗ್ಲೆಂಡಿನ ಲಿಂಡ್ಸೆ ಆರ್ ಡಾಡ್ ಎಂಬವ 80 ಮೈಲುಗಳನ್ನು 24 ಗಂಟೆಗಳಲ್ಲಿ ಕ್ರಮಿಸಿದ್ದು.									   (ಎಸ್.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ